ಪರಿಚಯ
ಒಂದು ಊರಿನಲ್ಲಿ ಶಾಲೆ, ಆಸ್ಪತ್ರೆ, ಕುಡಿಯುವ ನೀರಿನ ಸೌಲಭ್ಯಗಳನ್ನು ಸ್ಥಾಪಿಸಲು ಬೇಕಾದ ಕಾರಣ ಮತ್ತು ಮಾಹಿತಿ ಏನು?. ಒಂದು ತಾಣದಲ್ಲಿ ಕೊಳವೆ ಬಾವಿ ಕೊರೆಯಲು ಅಲ್ಲಿ ಅಂತರ್ಜಲದ ಮಟ್ಟ ಹಾಗೂ ಲಭ್ಯತೆ ಎಷ್ಟಿದೆ? ಒಂದು ಪ್ರದೇಶದಲ್ಲಿ ನೀರಿನ ಸಂಗ್ರಹಣೆಗೆ ಬೇಕಾದ ವಡ್ಡು, ಕಟ್ಟೆಗಳನ್ನು ನಿರ್ಮಿಸಲು ಬೇಕಾದ ಮಾಹಿತಿ ಮತ್ತು ಸ್ಥಳದ ಲಭ್ಯತೆ, ಮಣ್ಣಿನ ಸವಕಲು, ಗುಣಮಟ್ಟ ಇತ್ಯಾದಿ ಮತ್ತು ಆ ಪ್ರದೇಶದ ಮೇಲ್ಮೈ ಹಾಗೂ ಹಳ್ಳ ಕೊಳ್ಳಗಳ ಲಭ್ಯತೆ ಏನು?. ಒಂದು ಪ್ರದೇಶದಲ್ಲಿ ಕಾರ್ಖಾನೆಯನ್ನು ಸ್ಥಾಪಿಸಲು ಬೇಕಾಗುವ ಅಂಶಗಳು, ಸ್ಥಳದಲ್ಲಿ ಸಿಗುವ ನೈಸರ್ಗಿಕ ಸಂಪನ್ಮೂಲಗಳು, ಇದರ ಸ್ಥಾಪನೆಯಿಂದಾಗುವ ಪರಿಸರ ಮಾಲಿನ್ಯ ಏನು? ಇತರ ಹಲವಾರು ಪ್ರಶ್ನೆಗಳಿಗೆ ಉತ್ತರಿಸಲು ಲಭ್ಯವಿರುವ ಮಾಹಿತಿಗಳನ್ನು ನಾವು ಹೇಗೆ ಉಪಯೋಗಿಸುತ್ತೇವೆ ಹಾಗೂ ಅವು ಎಲ್ಲಿ ದೊರೆಯುತ್ತವೆ, ಯಾವುದೇ ಕ್ಷಣದಲ್ಲಿ ಎಷ್ಟೆಲ್ಲಾ ಆಕರಗಳಿಂದ ಮಾಹಿತಿ ಗಳನ್ನು ಸಂಗ್ರಹ ಮಾಡುತ್ತೇವೆ ಹಾಗೂ ನವೀಕರಿಸುತ್ತೇವೆ. ನಮಗೆ ನಿರ್ಣಯ ಕೈಗೊಳ್ಳಲು ವೈಜ್ಞಾನಿಕವಾಗಿ ಅನುಕೂಲವಾದ ಮಾಹಿತಿಗಳನ್ನು ಸಂಗ್ರಹ ಮಾಡುವ ಮತ್ತು ಕಾಲ ಕಾಲಕ್ಕೆ ನವೀಕರಿಸುವುದರಲ್ಲಿ ಅಡಕವಾಗಿರುತ್ತದೆ. ಇದಕ್ಕಾಗಿ 1982 ರಲ್ಲಿ ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ನೈಸರ್ಗಿಕ ಸಂಪನ್ಮೂಲಗಳ ದತ್ತಾಂಶ ನಿರ್ವಹಣಾ ವ್ಯವಸ್ಥೆ (NRDMS) – ಎಂಬ ಕಾರ್ಯಕ್ರಮವನ್ನು ಆರಂಭಿಸಿತು. ಕಂಪ್ಯೂಟರ್ ಕಾರ್ಯಶೈಲಿಗೆ ಹೊಂದಿಕೊಳ್ಳುವಂತಹ ದತ್ತಾಂಶಗಳು ಹಾಗೂ ನಕ್ಷೆಗಳನ್ನು ತಯಾರಿಸುವ ಮತ್ತು ವಿಶ್ಲೇಶಿಸುವ ವಿಧಾನಗಳನ್ನು ರೂಪಿಸುವುದು ಅದರ ಉದ್ದೇಶವಾಗಿತ್ತು. ಭಾರತ ಸಂವಿಧಾನದ 73 ಮತ್ತು 74ನೇ ತಿದ್ದುಪಡಿ ಅನ್ವಯ ಜಾರಿಯಾದ ಜಿಲ್ಲಾ ಪಂಚಾಯತ್ ಹಾಗು ತಾಲ್ಲೂಕು ಮಟ್ಟದಲ್ಲಿ ಯೋಜನೆಗೆ ಬೇಕಾದ ವೈಜ್ಞಾನಿಕವಾಗಿ ವಿಶ್ಲೇಶಿತವಾದ ಮಾಹಿತಿಗಳನ್ನು ಅವಶ್ಯಕತೆಗೆ ತಕ್ಕಂತೆ ಪೂರೈಸುವುದು ಇದರ ಮಹತ್ತರವಾದ ಜವಾಬ್ದಾರಿಯಾಗಿದೆ.
ಈ ಕಾರ್ಯಕ್ರಮದ ಫಲವಾಗಿ ಸಮಗ್ರ ಮಾಹಿತಿಯನ್ನೊಳಗೊಂಡ ನಕ್ಷೆಗಳು ಒಂದೇ ಸೂರಿನಡಿಯಲ್ಲಿ ಲಭ್ಯವಾಗುವುದು, ಉಪಗ್ರಹಗಳ ಸಹಾಯದಿಂದ ದೊರೆಯುವ ದೂರಸಂವೇದನೆ, ಭೂ ಸರ್ವೇಕ್ಷಣೆ ಇಲಾಖೆ ಮತ್ತಿತರ ಸಂಸ್ಥೆಗಳಿಂದ ದೊರೆಯುವ ನಕ್ಷೆಗಳು ಹಾಗೂ ದತ್ತಾಂಶಗಳನ್ನು ಕ್ರೋಡಿಕರಿಸುವುದು ಹಾಗೂ ಭೌಗೋಳಿಕ ಮಾಹಿತಿ ವ್ಯವಸ್ಥೆ (GIS) ಮೂಲಕ ನಕ್ಷೆಗಳನ್ನು ಕಂಪ್ಯೂಟರ್ ನಲ್ಲಿ ಗಣಕೀಕರಿಸಿ ದತ್ತಾಂಶಗಳನ್ನು ನಕ್ಷೆಗಳೊಂದಿಗೆ ಜೋಡಿಸಿ ವಿಶ್ಲೇಷಣಾ ಮಾಹಿತಿಗಳನ್ನು ಒದಗಿಸುವುದು. ಜಿಲ್ಲೆಯ ಸಮಗ್ರ ಮಾಹಿತಿ ಯನ್ನು ಕಂಪ್ಯೂಟರ್ ತೆರೆಯಲ್ಲಿ ಜಿಲ್ಲಾ ಮಟ್ಟದಿಂದ ಗ್ರಾಮ ಮಟ್ಟದವರೆಗೂ ವರ್ಣಮಯವಾಗಿ ಬಿಂಬಿಸಲು ಸಾಧ್ಯವಾಯಿತು. ರಾಷ್ಟ್ರಮಟ್ಟದ ಹಾಗೂ ರಾಜ್ಯಮಟ್ಟದಲ್ಲಿ ತಯಾರಾಗುವ ಯೋಜನೆಗಳು ಜಿಲ್ಲಾ ಮತ್ತು ತಾಲ್ಲೂಕ್ ಮಟ್ಟದಲ್ಲಿ ಸ್ಥಳೀಯವಾಗಿ ರೂಪಿಸಲು ಅನುಕೂಲ ಮಾಡಿಕೊಡಲಾಗುವುದು. ಸಾಂಪ್ರದಾಯಕವಾಗಿ ತೆಗೆದುಕೊಳ್ಳುತ್ತಿದ್ದ ತೀರ್ಮಾನಗಳನ್ನು ಮಾಹಿತಿ ಆದಾರದ ಮೇಲೆ ವೈಜ್ಞಾನಿಕವಾಗಿ ಬೇರೆ ಬೇರೆ ಭವಿಷ್ಯದ ನೋಟಗಳಿಂದ ತೆಗೆದುಕೊಳ್ಳುವುದು ಸಾದ್ಯವಾಗುತ್ತದೆ.