ಮುಚ್ಚಿ

ಇತಿಹಾಸ

ಶಿವಮೊಗ್ಗ ದಟ್ಟವಾದ ಕಾಡು, ಗುಡ್ಡಗಳಿಂದ ಮತ್ತು ವೈಭವದಿಂದ ಅವ್ಯಾಹತವಾಗಿ ಧುಮುಕುವ ಜಲಪಾತಗಳಿಂದ ಆವೃತ್ತಗೊಂಡಿದ್ದು ನೋಡುವ ಕಣ್ಣಿಗೆ ಒಂದು ನಿಜವಾದ ಪ್ರಕೃತಿಯ ಚಿತ್ರವನ್ನಾಗಿ ಮೂಡಿಸುತ್ತದೆ. ಬಹುಪಾಲು ಪ್ರದೇಶವು ಹಚ್ಚ ಹಸಿರಿನ ಭತ್ತದ ತೆನೆಗಳು ಗಾಳಿಯಲ್ಲಿ ತೂಗಾಡುವ ದೃಶ್ಯವು ಆ ಜಾಗವನ್ನು ಒಂದು ಚಿತ್ರಸದೃಶ್ಯ ಪ್ರದೇಶವನ್ನಾಗಿ ಮೂಡಿಸುತ್ತದೆ.

ಶಿವಮೊಗ್ಗ ಜಿಲ್ಲೆ ಕರ್ನಾಟಕದ ನಿಸರ್ಗಭರಿತ ಮಲೆನಾಡಿನ ಒಂದು ಭಾಗವಾಗಿದೆ ಮತ್ತು ಶಿವಮೊಗ್ಗ ಫಲವತ್ತಾದ ಕೃಷಿ ಭೂಮಿಯನ್ನು ಹೊಂದಿದ್ದು ಕರ್ನಾಟಕದ ಅಕ್ಕಿಯ ಕಣಜ ಎಂಬ ಹಿರಿಮೆಯನ್ನು ಪಡೆದಿದೆ. ಸಹ್ಯಾದ್ರಿ ಪರ್ವತಶ್ರೇಣಿ ಮತ್ತು ಅಲ್ಲಿ ಉಗಮಗೊಳ್ಳುವ ನದಿ-ಉಪನದಿಗಳು ಆದ ತುಂಗಭದ್ರಾ, ಶರಾವತಿ, ಕುಮುದ್ವತಿ ಮತ್ತು ವರದ ನದಿಗಳು ಶಿವಮೊಗ್ಗಕ್ಕೆ ಯಥೇಚ್ಛ ನೈಸರ್ಗಿಕ ಸೌಂದರ್ಯವನ್ನು ತಂದುಕೊಟ್ಟಿದೆ. ಶಿವಮೊಗ್ಗ ಅನೇಕ ರಾಜಮನೆತನಗಳ ಆಳ್ವಿಕೆಯಲ್ಲಿ ಇದ್ದಿತು. ಕದಂಬರು, ಗಂಗರು, ಚಾಲುಕ್ಯರು, ರಾಷ್ಟ್ರಕೂಟರು. ಹೊಯ್ಸಳರು ಮತ್ತು ವಿಜಯನಗರದ ಅರಸರು ಈ ಪ್ರದೇಶವನ್ನು ಆಳಿದ ರಾಜಮನೆತನಗಳಲ್ಲಿ ಪ್ರಮುಖರು. ಶಿವಮೊಗ್ಗಕ್ಕೆ ಸ್ವತಂತ್ರ ವ್ಯಕ್ತಿತ್ವ ಬಂದದ್ದು 16ನೇ ಶತಮಾನದ ಕೆಳದಿ ನಾಯಕರ ಆಳ್ವಿಕೆಯಲ್ಲಿ ಮತ್ತು ಶಿವಮೊಗ್ಗ ಎಂಬ ಹೆಸರು ‘ಶಿವ-ಮುಖ’,ಎಂಬ ಪದಪುಂಜದಿಂದ ಬಂದದ್ದು. ಇದನ್ನು ನಾಮಕರಿಸಿದವರು ಕೆಳದಿ ನಾಯಕರು. ಶಿವಮೊಗ್ಗ ತನ್ನ ಪರಾಕಾಷ್ಠೆಯನ್ನು ಕ್ರಿ.ಶ.1600ರಲ್ಲಿ ಶಿವಪ್ಪನಾಯಕರ ಆಳ್ವಿಕೆಯಲ್ಲಿ ಪಡೆದುಕೊಂಡಿತು.

ಸಹ್ಯಾದ್ರಿ ವ್ಯಾಪ್ತಿಯಲ್ಲಿ ಘಟ್ಟಗಳ ಭಾಗದಲ್ಲಿ ವರ್ಷ ಪೂರ್ತಿ ನದಿಗಳು ಹರಿಯುತ್ತಿರುತ್ತವೆ ಮತ್ತು ಫಲವತ್ತಾದ ಮೆಕ್ಕಲು ಮಣ್ಣನ್ನು ಆವರಿಸಿಕೊಂಡಿದೆ. ಈ ಸ್ವರೂಪದ ಪ್ರಕೃತಿಯ ಆಶೀರ್ವಾದದಿಂದ ಶಿವಮೊಗ್ಗ ಕರ್ನಾಟಕದ ಆಹಾರ ತೊಟ್ಟಿಲು ಎಂದು ಹೆಸರಾಗಿದೆ. ಶರಾವತಿ ಜಲವಿದ್ಯುತ್ ಯೋಜನೆಯು ಮತ್ತು ವರಾಹಿ ಯೋಜನೆಯು ಕರ್ನಾಟಕದ ವಿದ್ಯುತ್ ಬೇಡಿಕೆಯ ಬಹುಪಾಲನ್ನು ಪೂರೈಸುತ್ತದೆ.

ಕೆಲವು ನವಶಿಲಾಯುಗದ ತಾಣಗಳು ಗಮನಕ್ಕೆ ಬಂದವು ಮತ್ತು ತೆರೆದವು
  • ಶಿವಮೊಗ್ಗ ನಗರದ ಬಳಿ ತುಂಗಾ ನದಿಯ ದಂಡೆಯಲ್ಲಿರುವ ಗುಡ್ಡಮರಡಿ
  • ಹೊಸನಗರ ತಾಲ್ಲೂಕಿನಲ್ಲಿನ ನಗರ ಬಳಿಯ ನಿಲಾಸ್ಕಲ್
  • ತೀರ್ಥಹಳ್ಳಿ ತಾಲ್ಲೂಕಿನ ಅಗುಂಬೆ ಬಳಿಯ ಕುಂದ ಬೆಟ್ಟ
  • ತೀರ್ಥಹಳ್ಳಿ ಬಳಿ ಯಡೆಗುಡ್ಡೆ
  • ಭದ್ರಾವತಿ ತಾಲ್ಲೂಕಿನ ಅಶೋಕ ನಗರ, ಆನವೆರಿ ಮತ್ತು ನಾಗಸಮುದ್ರ

 

ಈಗ, ಶಿವಮೊಗ್ಗ ಜಿಲ್ಲೆಯು ಕೇವಲ ಪ್ರವಾಸಿ ತಾಣವಲ್ಲದೆ ಅತ್ಯುತ್ತಮ ವಿದ್ಯಾ ಕೇಂದ್ರವಾಗಿ ಹೆಸರಾಗಿದೆ. ಇಲ್ಲಿನ ಕಲೆ ಮತ್ತು ಸಂಸ್ಕೃತಿಯು ಜನರನ್ನು ಸುಸಂಸ್ಕೃತರನ್ನಾಗಿಸಿ ನಾಡಿನ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತಿದೆ. ಶಿವಮೊಗ್ಗ ನಗರವು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂದು ಕರೆಯಲ್ಪಡುತ್ತದೆ. ಇಲ್ಲಿನ ಮೋಡಿಮಾಡುವ ನಿಸರ್ಗದ ಬೆಟ್ಟಗಳ ದೃಶ್ಯಾವಳಿ, ದಿಬ್ಬಗಳು , ಹಸಿರು ಕಣಿವೆಗಳು, ನದಿಗಳು. ತೊರೆಗಳು, ದಟ್ಟವಾದ ಕಾಡುಗಳು, ಕೋಟೆಗಳು, ದೇವಾಲಯಗಳು, ಚಾರಿತ್ರಿಕ ಸ್ಥಳಗಳು, ಶ್ರೀಗಂಧದ ಮರಗಳು, ಸಸ್ಯ ಮತ್ತು ವನ್ಯ ಜೀವಿಗಳು ಮನಸೂರೆಗೊಳ್ಳುತ್ತವೆ. ಜೊತೆಯಲ್ಲಿ ಬಾಯಲ್ಲಿ ನೀರೂರಿಸುವ ತಿನಿಸುಗಳು ಮತ್ತು ಹೃದಯ ಸ್ಪರ್ಶಿಸುವ ಆತಿಥ್ಯ ಇಲ್ಲಿನ ವೈಶಿಷ್ಟತೆ. ಇದುವೆ–ಭೂಮಿಯ ಮೇಲಿನ ಸ್ವರ್ಗ.

ಶಿಲ್ಪ ಕಲೆ