ಕೃಷಿ ಇಲಾಖೆಯಲ್ಲಿ ಅನುಷ್ಟಾನಗೊಳಿಸುತ್ತಿರುವ ವಿವಿಧ ಯೋಜನೆಗಳ ಸಂಕ್ಷಿಪ್ತ ವಿವರ
- ಪ್ರಮಾಣಿತ / ಗುಣಮಟ್ಟದ ಬಿತ್ತನೆ ಬೀಜ ವಿತರಣಾ ಕಾರ್ಯಕ್ರಮ :-
ಜಿಲ್ಲೆಯ ಎಲ್ಲಾ ವರ್ಗದ ರೈತರಿಗೆ ಮುಖ್ಯ ಬೆಳೆಗಳ ಹೈಬ್ರಿಡ್, ಅಧಿಕ ಇಳುವರಿ ತಳಿಗಳು ಮತ್ತು ತಳಿಗಳ ಉತ್ತಮ ಗುಣಮಟ್ಟದ ಪ್ರಮಾಣಿತ ಹಾಗೂ ನಿಜಚೀಟಿ ಬಿತ್ತನೆ ಬೀಜಗಳನ್ನು ಮುಂಗಾರು ಮತ್ತು ಹಿಂಗಾರು/ಬೇಸಿಗೆ ಹಂಗಾಮುಗಳಲ್ಲಿ ರಿಯಾಯಿತಿ ದರದಲ್ಲಿ (ಸಾಮಾನ್ಯ-50% ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ 75%) ಸಕಾಲದಲ್ಲಿ ರೈತರಿಗೆ ಒದಗಿಸಿ ಅಧಿಕ ಇಳುವರಿ ಪಡೆಯಲು ನೆರವಾಗುತ್ತದೆ.
- ಸಸ್ಯ ಸಂರಕ್ಷಣಾ ಕಾರ್ಯಕ್ರಮ :-
ಬೆಳೆಗಳಲ್ಲಿ ಬಾಧಿಸುವ ಕೀಟ/ ರೋಗ/ ಕಳೆ ನಿರ್ವಹಣೆಗೆ ತುರ್ತು ಸಸ್ಯ ಸಂರಕ್ಷಣಾ ಕಾರ್ಯ ಕೈಗೊಳ್ಳಲು ರೈತರಿಗೆ ಶೇ. 50 ರಿಯಾಯಿತಿ ದರದಲ್ಲಿ ಈ ಕೆಳಕಂಡ ಪರಿಕರಗಳನ್ನು ಒದಗಿಸಲಾಗುವುದು.
ಅ) ಜೈವಿಕ ಪೀಡೆನಾಶಕ ಮತ್ತು ಜೈವಿಕ ನಿಯಂತ್ರಣಕಾರಕಗಳ ವಿತರಣೆ
ಆ) ಅವಶ್ಯಕತೆಗೆ ಅನುಗುಣವಾಗಿ ಕೀಟ ಹಾಗೂ ರೋಗ ನಿರ್ವಹಣೆಗೆ ಪೀಡೆನಾಶಕಗಳ ವಿತರಣೆ
ಇ) ಬೀಜೋಪಚಾರ ಹಾಗೂ ಸುರಕ್ಷಿತ ಕೀಟನಾಶಕಗಳ ಬಳಕೆ ಕುರಿತು ತರಬೇತಿ/ಆಂದೋಲನ ಕಾರ್ಯಕ್ರಮ.
- ಮಣ್ಣಿನ ಸತ್ವ ಹೆಚ್ಚಿಸುವಿಕೆ ಕಾರ್ಯಕ್ರಮ :-
ಮಣ್ಣಿನ ಫಲವತ್ತತೆ ಹೆಚ್ಚಿಸಲು ಹಾಗೂ ರೈತರ ಆರ್ಥಿಕ ಮಟ್ಟ ಸುಧಾರಿಸುವುದು ಈ ಯೋಜನೆಯ ಮೂಲ ಉದ್ದೇಶ ಈ ಯೋಜನೆಯಡಿ ಕೃಷಿ ಪರಿಕರಗಳನ್ನು (ಹಸಿರೆಲೆ ಗೊಬ್ಬರ ಬೀಜ, ಜಿಪ್ಸಂ/ಕೃಷಿ ಸುಣ್ಣ/ಡೋಲೋಮೈಟ್, ಲಘು ಪೋಷಕಾಂಶಗಳ, ಎರೆ ಹುಳುಗೊಬ್ಬರ, ಸಿಟಿ ಕಾಂಪೋಸ್ಟ್(Bulk Supply), ಸಾವಯವ ಗೊಬ್ಬರ(ಆರ್ಗಾನಿಕ್ ಮೆನ್ಯೂರ್), ರಂಜಕಯುಕ್ತ ಸಾವಯವ ಗೊಬ್ಬರ (PROM), ಖಾದ್ಯವಲ್ಲದ ಏಣ್ಣೆ ರಹಿತ ಹಿಂಡಿ ಗೊಬ್ಬರ (ಬೇವು) ಗಳನ್ನು ಸಾಮಾನ್ಯ-50% ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ 75% ವಿತರಣೆ ಮಾಡಲಾಗುವುದು.
- ಕೇಂದ್ರ ಪುರಸ್ಕೃತ ಕೃಷಿ ಯಾಂತ್ರೀಕರಣ ಉಪ ಅಭಿಯಾನ :-
ಕೃಷಿ ಕಾರ್ಮಿಕರ ಕೊರತೆ ಸಮಸ್ಯೆಯನ್ನು ನೀಗಿಸಿ, ಕೃಷಿ ಚಟುವಟಿಕೆಗಳ ಶ್ರಮದಾಯಕ ದುಡಿಮೆಯನ್ನು ತಗ್ಗಿಸಿ ಸಕಾಲದಲ್ಲಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುವ ಉದ್ದೇಶದಿಂದ (ಸಣ್ಣ ಟ್ರ್ಯಾಕ್ಟರ್ ಪವರ್ ಟಿಲ್ಲರ್, ಭೂಮಿ ಸಿದ್ಧತೆ ಉಪಕರಣಗಳು, ಬಿತ್ತನೆ/ನಾಟಿ ಉಪಕರಣಗಳು, ಅಂತರ ಬೇಸಾಯ ಉಪಕರಣಗಳು, ಡೀಸಲ್ ಪಂಪ್ ಸೆಟ್, ಟ್ರ್ಯಾಕ್ಟರ್/ಟಿಲ್ಲರ್/ಇಂಜಿನ್ ಚಾಲಿತ ಸಸ್ಯ ಸಂರಕ್ಷಣಾ ಉಪಕರಣಗಳು ಹಾಗೂ ಕೃಷಿ ಸಂಸ್ಕರಣೆಗೆ ಉಪಯುಕ್ತವಾಗುವ ವಿವಿಧ ಮಾದರಿಯ ಕೃಷಿ ಯಂತ್ರೋಪಕರಣಗಳನ್ನು) ಸಾಮಾನ್ಯ ರೈತರಿಗೆ ಶೇ.50 ಸಹಾಯಧನ ಹಾಗೂ ಪ.ಜಾತಿ/ ಪ.ಪಂಗಡ ರೈತರಿಗೆ ಶೇ.90 ಸಹಾಯಧನದಡಿ ಘಟಕಗಳನ್ನು ಒದಗಿಸಲಾಗುತ್ತಿದೆ.
- ಕೃಷಿ ಉತ್ಪನ್ನಗಳ ಸಂಸ್ಕರಣೆ :-
ಕೃಷಿ ಉತ್ಪನ್ನಗಳನ್ನು ಸಂಸ್ಕರಣೆಗೆ ಒಳಪಡಿಸಿ ಗುಣಮಟ್ಟದ ಉತ್ಪನ್ನಗಳನ್ನು ರೈತರಿಗೆ ಹಾಗೂ ಬಳಕೆದಾರರಿಗೆ ಒದಗಿಸುವ ಉದ್ದೇಶದಿಂದ ಕೃಷಿ ಸಂಸ್ಕರಣೆ ಘಟಕಗಳಾದ – ಹಿಟ್ಟಿನ ಗಿರಣಿ, ಸಣ್ಣ ರೈಸ್ ಮಿಲ್, ಎಣ್ಣೆ ತೆಗೆಯುವ ಯಂತ್ರ, ರಾಗಿ ಕ್ಲೀನಿಂಗ್ ಮಿಷಿನ್, ಶುಗರ್ ಕೇನ್ ಕ್ರಶಿಂಗ್ ಯೂನಿಟ್ (ಬೆಲ್ಲದ ಗಾಣ), ಪಲ್ವರೈಸರಗಳು, ಹಾಗೂ ರೈತರು ಸಕಾಲದಲ್ಲಿ ಕೃಷಿ ಉತ್ಪನ್ನಗಳನ್ನು ಒಣಗಿಸಲು ಐದು ಪದರಗಳುಳ್ಳ 250 GSM-HDPE ಕಪ್ಪು ಬಣ್ಣದ (8ಮೀ*6ಮೀ ಅಳತೆ) ಟಾರ್ಪಲಿನ್ ಗಳನ್ನು ವಿತರಿಸಲು ಕೃಷಿ ಉತ್ಪನ್ನಗಳ ಸಂಸ್ಕರಣೆ ಕಾರ್ಯಕ್ರಮವನ್ನು ಸಾಮಾನ್ಯ ರೈತರಿಗೆ ಶೇ.50 ರಿಯಾಯಿತಿ ಹಾಗೂ ಪ.ಜಾತಿ/ ಪ.ಪಂಗಡ ರೈತರಿಗೆ ಶೇ.90 ಸಹಾಯಧನದಡಿ ಘಟಕಗಳನ್ನು ಒದಗಿಸಲಾಗುತ್ತಿದೆ.
- ಕೃಷಿ ಯಂತ್ರಧಾರೆ :- (ಕೃಷಿ ಯಂತ್ರೋಪಕರಣಗಳ ಬಾಡಿಗೆ ಆಧಾರಿತ ಸೇವಾ ಕೇಂದ್ರ)
ರೈತರು ತಮಗೆ ಬೇಕಾದ ಸಮಯದಲ್ಲಿ ಅವಶ್ಯವಿರುವ ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆ ರೂಪದಲ್ಲಿ ಪಡೆದು ಕೃಷಿ ಯಂತ್ರೋಪಕರಣಗಳ ಪರಿಪೂರ್ಣ ಸಾಮರ್ಥ್ಯವನ್ನು ಕೃಷಿ ಬಳಕೆಗೆ ಉಪಯೋಗಿಸಿಕೊಂಡು ಆರ್ಥಿಕ ಮಟ್ಟವನ್ನು ಸುಧಾರಿಸಿಕೊಳ್ಳಲು ಸಹಾಯಕವಾಗಿದೆ. ಕೃಷಿ ಯಂತ್ರೋಪಕರಣಗಳ ಬಾಡಿಗೆ ಆಧಾರಿತ ಸೇವಾ ಕೇಂದ್ರ ಯೋಜನೆಯಡಿ ಸಕಾಲದಲ್ಲಿ ಹಾಗೂ ಕಡಿಮೆ ಬಾಡಿಗೆ ದರದಲ್ಲಿ ಕೃಷಿ ಯಂತ್ರೋಪಕರಣಗಳ ತಯಾರಕ ಸಂಸ್ಥೆಗಳ ಮೂಲಕ ಬಾಡಿಗೆ ಆಧಾರಿತ ಸೇವಾ ಕೇಂದ್ರಗಳನ್ನು ಹೋಬಳಿ ಮಟ್ಟದಲ್ಲಿ ಸ್ಥಾಪಿಸಲಾಗಿದೆ.
- ಸೂಕ್ಷ್ಮ ನೀರಾವರಿ ಯೋಜನೆ:-
ರೈತರಲ್ಲಿ ನೀರಿನ ಮಿತ ಬಳಕೆ ಮಾಡುವಂತೆ ಪ್ರೋತ್ಸಾಹಿಸುವುದೇ ಈ ಯೋಜನೆಯ ಮುಖ್ಯ ಉದ್ದೇಶ. ಈ ಕಾರ್ಯಕ್ರಮದಡಿ ನೀರಾವರಿ ಘಟಕಗಳಾದ ತುಂತುರು / ಹನಿ ನೀರಾವರಿ ಘಟಕಗಳನ್ನು ಎಲ್ಲಾ ವರ್ಗದ ರೈತರಿಗೆ 2 ಹೆಕ್ಟೆರ್ ಪ್ರದೇಶದವರೆಗೆ ಶೇ.90 ಸಹಾಯಧನ ಮತ್ತು 2 ಹೆಕ್ಟೇರ್ ಗಿಂತ ಮೇಲ್ಪಟ್ಟು 5 ಹೆಕ್ಟೇರ್ ವರೆಗೆ ಸಾಮಾನ್ಯ ರೈತರಿಗೆ ಶೇ.45 ಹಾಗೂ ಪ.ಜಾತಿ/ಪ.ಪಂಗಡ ರೈತರಿಗೆ ಶೇ.90 ಸಹಾಯಧನ ಒದಗಿಸಲಾಗುವುದು.
- ಸಮಗ್ರ ಕೃಷಿ ಅಭಿಯಾನ- ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ :-
ಮುಂಗಾರು ಹಂಗಾಮು ಪೂರ್ವದಲ್ಲಿ ರೈತರಿಗೆ ಕೃಷಿಯನ್ನು ಹೆಚ್ಚು ಲಾಭದಾಯಕವಾಗಿ ಮಾಡಲು ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳ ಸಮನ್ವಯದೊಂದಿಗೆ ಸಮಗ್ರ ಕೃಷಿ ಮಾಹಿತಿಯನ್ನು ರೈತರಿಗೆ ತಲುಪಿಸುವುದು, ಉತ್ಪಾದಕತೆ ಹೆಚ್ಚಿಸುವ ತಾಂತ್ರಿಕತೆಗಳ ಮನವರಿಕೆ ಮಾಡುವುದು, ವಿಜ್ಞಾನಿಗಳೊಂದಿಗೆ ರೈತರ ಸಂವಾದ ವಿವಿಧ ಕೃಷಿ ಚಟುವಟಿಕೆಗಳ ಕುರಿತು ಗ್ರಾಮ ಪಂಚಾಯಿತಿ ಮತ್ತು ಹೋಬಳಿ ಮಟ್ಟದಲ್ಲಿ ಅರಿವು ಮೂಡಿಸುವುದು ಹಾಗೂ ಮಾಹಿತಿ ಒದಗಿಸುವ ಕಾರ್ಯಕ್ರಮವಾಗಿರುತ್ತದೆ.
- ಕರ್ನಾಟಕ ರಾಜ್ಯ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ :-
ಅನಿಶ್ಚಿತ ಕೃಷಿಯಲ್ಲಿ (ಅತಿವೃಷ್ಠಿ, ಅನಾವೃಷ್ಠಿ, ಅಕಾಲಿಕ ಮಳೆ ಮುಂತಾದ ಪ್ರಕೃತಿ ವಿಕೋಪ) ನಿಶ್ಚಿತ ಆದಾಯ ತರುವ ಉದ್ದೇಶದಿಂದ ಅಗ್ರಿಕಲ್ಚರ್ ಇನ್ ಶ್ಯೂರೆನ್ಸ್ ಕಂಪನಿ ಇವರ ಸಹಯೋಗದಿಂದ ಹೋಬಳಿ ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಯೋಜನೆಯನ್ನು ಅನುಷ್ಟಾನಗೊಳಿಸಲಾಗುವುದು. (ಹೋಬಳಿ ಮಟ್ಟಕ್ಕೆ ರಾಗಿ-ಮಳೆ ಆಶ್ರಿತ ಹಾಗೂ ಜೋಳ- ಮಳೆ ಆಶ್ರಿತ ಮತ್ತು ಗ್ರಾಮ ಪಂಚಾಯಿತಿ ಮಟ್ಟಕ್ಕೆ ಭತ್ತ-ನೀರಾವರಿ, ಭತ್ತ- ಮಳೆಆಶ್ರಿತ, ಮುಸುಕಿನ ಜೋಳ- ನೀರಾವರಿ, ಮುಸುಕಿನ ಜೋಳ- ಮಳೆ ಆಶ್ರಿತ) ಈ ಬೆಳೆಗಳಿಗೆ ಬೆಳೆ ಸಾಲ ಪಡೆದ ರೈತರು (ಇಚ್ಛೆ ಪಡದೇ ಇದ್ದಲ್ಲಿ ಬೆಳೆ ನೋಂದಣೆ ಅಂತಿಮ ದಿನಾಂಕಕ್ಕೆ 7 ದಿವಸಗಳ ಮುಂಚಿತವಾಗಿ ಲಿಖಿತ ಮುಚ್ಚಳಿಕೆ ನೀಡಿದಲ್ಲಿ ಬೆಳೆ ವಿಮೆ ಯೋಜನೆಯಿಂದ ಕೈಬಿಡಲಾಗುವುದು) ಮತ್ತು ಸಾಲ ಪಡೆಯದ ರೈತರು ಅರ್ಜಿಯೊಂದಿಗೆ ಪಹಣಿ/ಖಾತೆ/ಪಾಸ್ ಪುಸ್ತಕ/ಕಂದಾಯ ರಶೀದಿ ನೀಡಿ ಬೆಳೆ ವಿಮೆಗೆ ನೊಂದಾಯಿಸಬಹುದಾಗಿದೆ.
- ಕೃಷಿ ಪ್ರಶಸ್ತಿ:-
ಕೃಷಿ ಕ್ಷೇತ್ರದಲ್ಲಿ ಅತಿ ಹೆಚ್ಚಿನ ಉತ್ಪಾದನೆ ಹಾಗೂ ಉತ್ಪಾದಕತೆ ಹೆಚ್ಚಿಸಲು ರೈತರಲ್ಲಿ ಒಂದು ಆರೋಗ್ಯಕರ ಸ್ಪರ್ಧಾ ಮನೋಬಾವವನ್ನು ಉಂಟುಮಾಡಿ ಹೆಚ್ಚು ಇಳುವರಿ ಪಡೆದ ರೈತರಿಗೆ (ರಾಜ್ಯ ಮಟ್ಟದಲ್ಲಿ ವಿಜೇತರಾದ ರೈತರಿಗೆ ಪ್ರಥಮ-ರೂ.50,000/-, ದ್ವಿತೀಯ-ರೂ.40,000/-, ಹಾಗೂ ತೃತೀಯ- ರೂ. 35,000/- ಜಿಲ್ಲಾ ಮಟ್ಟದಲ್ಲಿ ಪ್ರಥಮ- ರೂ. 30,000/-, ದ್ವಿತೀಯ- ರೂ. 25,000/-, ಹಾಗೂ ತೃತೀಯ- ರೂ. 20,000/-, ಮುಂದುವರೆದು ತಾಲ್ಲೂಕು ಮಟ್ಟದಲ್ಲಿ ಪ್ರಥಮ- ರೂ. 15,000/-, ದ್ವಿತೀಯ- ರೂ. 10000/-, ಹಾಗೂ ತೃತೀಯ-ರೂ.5000/- ಬಹುಮಾನ ಮೂಲಕ ಉತ್ತೇಜನ ನೀಡುವ ಒಂದು ಕಾರ್ಯಕ್ರಮವಾಗಿದೆ.
- ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ:-
ಕೇಂದ್ರ ಸರ್ಕಾರದ ಪಿ ಎಂ ಕಿಸಾನ್ ಯೋಜನೆಯಲ್ಲಿ ವಾರ್ಷಿಕವಾಗಿ ರೂ.6000/- ಗಳನ್ನು ಅರ್ಹ ರೈತ ಫಲಾನುಭವಿಗಳಿಗೆ 3 ಕಂತುಗಳಲ್ಲಿ ನೀಡಲಾಗುತ್ತಿದ್ದು ಮುಂದುವೆರೆದು ದಿನಾಂಕ 14-08-2019 ರಿಂದ ರಾಜ್ಯ ಸರ್ಕಾರವೂ ಹೆಚ್ಚುವರಿಯಾಗಿ ವಾರ್ಷಿಕ ರೂ.4000 ರಂತೆ ಎರಡು ಕಂತುಗಳಲ್ಲಿ ನೇರ ನಗದು ವರ್ಗಾವಣೆ (ಡಿ ಬಿ ಟಿ) ಮೂಲಕ ಒಟ್ಟು ರೂ. 10,000/- ಗಳನ್ನು ರೈತರಿಗೆ ಕೃಷಿ ಉತ್ತೇಜನಾಗಾಗಿ ನೀಡಲಾಗುತ್ತಿದೆ.
- ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನ
ಈ ಯೋಜನೆಯಡಿ ಅಕ್ಕಿ, ದ್ವಿದಳ ಧಾನ್ಯ, ಎಣ್ಣೆಕಾಳು ಬೆಳೆಗಳಲ್ಲಿ ಇಳುವರಿ ಹೆಚ್ಚಿಸುವ ಸಲುವಾಗಿ ನಿರ್ದಿಷ್ಟ ನವೀನ ತಾಂತ್ರಿಕತೆಯ ಗುಚ್ಛ ಪ್ರಾತ್ಯಕ್ಷಿಕೆ (ರೂ. 9000/- ಪ್ರತಿ ಹೆಕ್ಟೇರ್) ಭತ್ತದಲ್ಲಿ ನೇರ ಬಿತ್ತನೆ/ಯಾಂತ್ರೀಕೃತ ಸಾಲು ನಾಟಿ/SRI ಪದ್ದತಿಯ ತಾಂತ್ರಿಕತೆಯನ್ನು ನೀಡಲು ಅವಕಾಶವಿರುತ್ತದೆ, ಸಮಗ್ರ ಪೋಷಕಾಂಶ, ಸಮಗ್ರ ಪೀಡೆ ನಿರ್ವಹಣೆ, ನೀರಾವರಿ ಸಾಧನ, ಸ್ಥಳೀಯ ಪ್ರೇರಕಗಳು, ಹಾಗೂ ಕೃಷಿ ಯಂತ್ರೋಪಕರಣಗಳನ್ನು ಶೇ.50 ಸಹಾಯಧನದಡಿಯಲ್ಲಿ ಈ ಯೊಜನೆಯಲ್ಲಿ ಒದಗಿಸಲಾಗುವುದು.
- ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ (ಕೃಷಿ ಸಂಜೀವಿನಿ) ಕಾರ್ಯಕ್ರಮ. :-
ಕೀಟ, ರೋಗ ಮತ್ತು ಕಳೆಗಳ ಬಾಧೆ ಮತ್ತು ಮಣ್ಣಿನ ಪೋಷಕಾಂಶ ಕೊರತೆ ಹಾಗೂ ಸಮರ್ಪಕ ನಿರ್ವಹಣೆ ಕುರಿತಂತೆ ರೈತರ ತಾಕುಗಳಲ್ಲಿಯೇ ಹತೋಟಿ ಕ್ರಮಗಳ ಕುರಿತು ಮಾರ್ಗೋಪಾಯ ಒದಗಿಸಲು ರೈತರ ಸಹಾಯವಾಣಿ 155313 ಕ್ಕೆ ಉಚಿತ ಕರೆ ಮಾಡಿದಲ್ಲಿ ಕೃಷಿ ಸಂಜೀವಿನಿ ವಾಹನವು ತಾಂತ್ರಿಕ ಸಿಬ್ಬಂದಿಗಳೊಂದಿಗೆ ರೈತರ ತಾಕುಗಳಿಗೆ ಭೇಟಿ ನೀಡಿ ಸಲಹೆ ನೀಡಲಾಗುತ್ತದೆ.
ಇಲಾಖಾ ವೆಬ್ ಸೈಟ್:-https://raitamitra.karnataka.gov.in
ರೈತರ ಸಹಾಯವಾಣಿ ಕೇಂದ್ರ ದೂರವಾಣಿ ಸಂಖ್ಯೆ: 18004253553
ಕೃಷಿ ಸಂಜೀವಿನಿ ರೈತರ ಉಚಿತ ಸಹಾಯವಾಣಿ: 155313